ಸವಿ ನೆನಪುಗಳು ಬೇಕು


ನಾವು ದೊಡ್ಡಬಳ್ಳಾಪುರದಲ್ಲಿ ಇದ್ದಾಗ .. ಅಪ್ಪನ ಪೇಶಂಟ್ಗಳು ಹಳ್ಳಿಯಿಂದ ಬರುವಾಗ ಅವರೆಕಾಯಿ , ಹುಣಿಸೆ ಹಣ್ಣು ಎಲ್ಲಾ ತರುತ್ತಿದ್ದರು . ಅಂಗಡಿಗಿಂತ ಕಡಿಮೆ ಬೆಲೆಯಲ್ಲಿಕೊಡುತ್ತಿದ್ದರು . ಅಮ್ಮನಿಗೆ ಹುಣಿಸೇಹಣ್ಣಿ ನ ಬೀಜ ತೆಗೆದು , ಚೊಕ್ಕ ಮಾಡಿ ಸ್ವಲ್ಪ ಉಪ್ಪು ಸೇರಿಸಿ ಒರಳಲ್ಲಿ ಕುಟ್ಟಿ ಉಂಡೆ ಕಟ್ಟಿ ದೊಡ್ಡ ಜಾರಿಯಲ್ಲಿ ಇಡುತ್ತಿದ್ದರು . ಈ ವರ್ಷಕ್ಕೆ ಸಾಕು ಅನ್ನುತ್ತಿದ್ದರು . ಹುಣಿಸೇಹಣ್ಣಿನ ಗೊಜ್ಜು ಯಾವಾಗಲೂ ಇರುತ್ತಿತ್ತು . ನಮಗೆ ಅಲ್ಲಿ ಅಯ್ಯಂಗಾರ್ ಕುಟುಂಬಗಳ ಬಳಕೆಹೆಚ್ಚಿತ್ತು . ಅವರಿಂದ ಪುಳಿಯೋಗರೆ ಗೊಜ್ಜು ಕಲಿತು ಮಾಡಿಡುತ್ತಿದ್ದರು . ಹಳ್ಳಿಯಿಂದ ಬೆಣ್ಣೆ ಮಾರುವವನು ಬಂದರೆ ಅಪ್ಪನದೇ ವ್ಯಾಪಾರ !! ಐದರಿಂದ ಹತ್ತು ಕೆಜಿ ಬೆಣ್ಣೆ . ಅಮ್ಮ ಅದನ್ನು ಹದವಾಗಿ ಕಾಯಿಸಿ ಮೇಲೆ ವೀಳೆಯದೆಲೆ ಹಾಕುತ್ತಿದ್ದರು . ನನ್ನನ್ನು ವೀಳೆಯದೆಲೆ ತರಲು ಅಂಗಡಿಗೆ ಓಡಿಸುತ್ತಿದ್ದರು .ಭರಣಿಗಳ ತುಂಬಾ ಘಮ ಘಮ ಬೆಣ್ಣೆ !

ಬೆಣ್ಣೆ ಕಾಯಿಸಿದ ಮರುದಿನ ಬೆಣ್ಣೆ ದೋಸೆ ನಮಗೆಲ್ಲಾ.. ನನಗೆ ದೋಸೆ ಕಾವಲಿ ಮೇಲಿರುವಾಗಲೇ ಸಕ್ಕರೆ ಹಾಕಿ ಸುತ್ತಿ ಕೊಡಬೇಕಿತ್ತು !! ಬೆಣ್ಣೆ ಕಾಯಿಸಿದ ಪಾತ್ರೆಯಲ್ಲಿ ಹುರಳಿಕಾಯಿ ಹುಳಿ .. ಕುದಿಯುತ್ತಿದ್ದರೆ . ಜಗಲಿಗೆ ಪರಿಮಳ ಬರುತ್ತಿತ್ತು . ಅಪ್ಪ ಕ್ಲಿನಿಕ್ ಬಾಗಿಲುಹಾಕೋ ಹೊತ್ತಿಗೆ ಸರಿಯಾಗಿ ಅಮ್ಮ ಹುಳಿಗೆ ಒಗ್ಗರಣೆ ಹಾಕುತ್ತಿದ್ದರು . ಚಾಪೆ ಹಾಕು , ಲೋಟ ಇಡು . ಅಂತ ಅಮ್ಮ ನನಗ ಆದೇಶ ಮಾಡುತ್ತಿದ್ದರು . ಅಪ್ಪ ಕೈ ಕಾಲು ತೊಳೆದು ಬಂದು ಊಟಕ್ಕೆ ಕೂತರೆ ..  ಅಮ್ಮ ಬಡಿಸುತ್ತ ಇದ್ದರು . 

ಮಡಿಕೇರಿಯಿಂದ ಅಜ್ಜಿ ಬಂದು ತುಂಬಾ ದಿನಗಳು ನಮ್ಮ ಮನೆಯಲ್ಲಿ ಇರುತ್ತಾಇದ್ದರು . ಸಣ್ಣ ಸಣ್ಣ ಪಾತ್ರೆಗಳಲ್ಲಿ ನೀರು ತುಂಬಿ ಇಟ್ಟುಕೊಳ್ಳುತ್ತ ಇದ್ದರು .. ನೀರು ಬರುವುದು ಸೀಮಿತ ಅವಧಿಯಲ್ಲಿ ಮಾತ್ರ ಆಗಿದ್ದಕ್ಕೆ ಅಜ್ಜಿಗೆ ನೀರು ತುಂಬಾ ಮುಖ್ಯ ಆಗುತ್ತಾ ಇತ್ತು . 

ಅಜ್ಜಿ ಗೆ ಪಾತ್ರೆ ವ್ಯಾಪಾರ ತುಂಬಾ ಇಷ್ಟ ..ನಾನು ಅಮ್ಮ ಅಜ್ಜಿ ಜೊತೆ ಜಟಕಾ ಗಾಡಿಯಲ್ಲಿ ಪೇಟೆಗೆ  ಪಾತ್ರೆ ಅಂಗಡಿಗೆ ಹೋಗುತ್ತಾಇದ್ದೆವು .. ಭರ್ಜರಿ ವ್ಯಾಪಾರ ಅಜ್ಜಿ ದು !! ಯಾರಿಗೆ ಯಾವುದು ಕೊಡಬೇಕು .. ಎಲ್ಲವೂ ಅವರದೇ ತೀರ್ಮಾನ , 

ನನಗೆ ಅದೊಂದು ಸಂಭ್ರಮ . 

ಅಡಿಗೆಮನೆ ಪಕ್ಕದಲ್ಲಿ ಊಟಕ್ಕೆ ಮತ್ತು ದೇವರ ಪೂಜೆಗೆ ಒಂದು ಕೋಣೆ ಇತ್ತು . ಅಲ್ಲಿ ಒಂದು ಸ್ಟೂಲ್ ಹಾಕಿ ಅದರ ಮೇಲೆ ಅಜ್ಜಿ ಕುಳಿತುದೊಡ್ಡ ಬಾಣಲೆಯಲ್ಲಿ ಕೋಡುಬಳೆ ಕರೆಯುತ್ತಾ ಇದ್ದರು .. ಅದರ ರುಚಿ ಬಲ್ಲವರೇ ಬಲ್ಲರು , ಆ ರುಚಿ ಮತ್ತೆ ನಾನು ಕಾಣಲಿಲ್ಲ . 

ಅದೆಷ್ಟೋ ನೆನಪುಗಳನ್ನು ದಾಖಲಿಸಿ ಇಡಬಹುದಿತ್ತು ಅನ್ನಿಸುತ್ತದೆ

Comments